Monday 2 September 2019

ಳ9b ವಿಜಯ ದಾಸ ಸುಳಾದಿ ಸಾಹಿತ್ಯ VIJAYA DASA SULADI


ಆರು ಸುಳಾದಿಗಳು ಇಲ್ಲಿವೆ. 
ಎಲ್ಲಾ ಸುಳಾದಿಗಳಿಗೆ ಈ ನೀಲಿ ಲಿಂಕ್ ಒತ್ತಿ
for suladi look here  check here for 500+ suladi 


HARIKATHAMRUTASARA ರಚನೆ : ಶ್ರೀ ಜಗನ್ನಾಥ ದಾಸರು

ಕನ್ನಡದಲ್ಲಿ ಮತ್ತು ಇಂಗ್ಲಿಷಿನಲ್ಲಿ ಸಾಹಿತ್ಯ ಮತ್ತು ಆಡಿಯೋ ಗಾಗಿ ಈ ಲಿಂಕ್ ಒತ್ತಿ 
for sandhi 1 to 33 look here for lyrics and audio




ಎಲ್ಲಾ ದೇವರನಾಮಗಳಿಗೆ ಈ ನೀಲಿ ಲಿಂಕ್ ಒತ್ತಿ 
for devaranama look here Also learn 000s of devaranama




ಶ್ರೀ ಕಪಿಲದೇವರ ಸ್ತೋತ್ರ ಸುಳಾದಿ (ಶ್ರೀ ವಿಜಯದಾಸರು)
ರಾಗ – ತೋಡಿ        ತಾಳ – ಧ್ರುವ

ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾ
ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ
ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ
ಚಿದ್ದೇಹ ಸರ್ವಕಾಲ ಸುಂದರಸಾರ
ಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾ
ಹೃದ್ರೋಗನಾಶ ವೈಕುಂಠವಾಸ
ವಿದ್ಯಾತೀತ ವಿಶ್ವನಾಟಕ ನಾರಾಯಣ
ವಿದ್ಯ ಉದ್ಧಾರಕೆ ಉದಧಿ ಸದನಾ
ಸಿದ್ಧಾದಿ ವಿನುತ ಸಂತತ ಪಾತಾಳವಾಸಿ
ಬುದ್ಧಿ ವಿಶಾಲ ಮಹಿಮ ಪಾಪಹಾರಿ
ಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತ
ಬದ್ಧ ವಿಚ್ಛೇದ ನಾನಾ ರೂಪಾತ್ಮಕಾ
ಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾ
ಅದ್ವೈಯ ಅನಾದಿ ಪುರುಷ ಚಿತ್ರ
ಕರ್ದಮ ಮುನಿಸೂನು ವಿಜಯ ವಿಠ್ಠಲ ಕಪಿಲ
ನಿರ್ದೋಷಕರುಣಾಬ್ಧಿ ಸರ್ವರಾಧಾರಿ || ೧ ||

ತಾಳ – ಮಟ್ಟ

ಆದಿಮನ್ವಂತರದಿ ಜನಿಸಿದ ಮಹದೈವ
ಆದಿಪೊರಬೊಮ್ಮ ಬೊಮ್ಮನಯ್ಯ ಜೀಯಾ
ಸಾಧುಜಾನರ ಪ್ರಿಯಾ ಸಂತತ ಮುನಿತಿಲಕಾ
ಬೋಧ ಶರೀರ ಭಕುತ ಮನೋಹರ ಹರಿ
ಮಾಧವ ಸಿರಿ ವಿಜಯ ವಿಠ್ಠಲ ವಿಮಲೇಶಾ
ಮೋದ ಮತಿಯ ಕೊಡುವ ಕಪಿಲ ಭಗವನ್ಮೂರ್ತಿ || ೨ ||

ತಾಳ – ತ್ರಿವಿಡಿ

ಘನಮಹಿಮ ಗೌಣಾಂಡದೊಳಗೆ ಲೀಲೆಯಿಂದ
ಜನಿಸಿ ಮೆರೆದೆ ಬಿಂದು ಸರೋವರದಲ್ಲಿ
ಮಿನುಗುವ ದ್ವಯ ಹಸ್ತ ಅಪ್ರಾಕೃತ ಕಾಯ
ಇನನಂತೆ ಒಪ್ಪುವ ಶಿರೋರುಹವೋ
ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ
ಅನವರತ ತುಂಬಿ ಸೂಸುತಲಿದಕೋ
ಜನನಿ ದೇವಹೂತಿಗೆ ಉಪದೇಶವನು ಮಾಡಿ
ಗುಣ ಮೊದಲಾದ ತತ್ವ ತಿಳಿಸಿದೆ
ತನುವಿನೊಳಗೆ ನೀನೆ ತಿಳಿದು ತಿಳಿದೆ ನಿತ್ಯ
ಜನರನ್ನು ಪಾಲಿಸುವ ಕಪಿಲಾಖ್ಯನೆ
ಅನುದಿನ ನಿನ್ನ ಧ್ಯಾನವ ಮಾಡಿ ಮಣಿಯಿಂದ
ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ
ಎನೆಗಾಣೆ ನಿನ್ನ ಲೋಚನದ ಶಕ್ತಿಗೆ ಸಗರ
ಜನಪ ನಂದನರನ್ನು ಭಂಗಿಸಿದೆ
ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ
ಮನುಜನಿಗೆ ಮಹಪದವಿ ಬರುವದಯ್ಯ
ಮುನಿಕುಲೋತ್ತಮ ಕಪಿಲ ವಿಜಯ ವಿಠ್ಠಲರೇಯ
ಎನಗೆ ಯೋಗ ಮಾರ್ಗವನು ತೋರೊ ತವಕದಿಂದ || ೩ ||

ತಾಳ – ಅಟ್ಟ

ಕಪಿಲ ಕಪಿಲಯೆಂದು ಪ್ರಾತಃಕಾಲದಲೆದ್ದು
ಸಪುತ ಸಾರಿಗೆಯಲಿ ನುಡಿದ ಮಾನವನಿಗೆ
ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲಾ
ಅಪರಮಿತ ಸೌಖ್ಯ ಅವನ ಕುಲಕೋಟಿಗೆ
ಗುಪುತ ನಾಮವಿದು ಮನದೊಳಗಿಡುವುದು
ಕಪಟ ಜೀವರು ಈತನು ಒಬ್ಬ ಋಷಿಯೆಂದು
ತಪಿಸುವರು ಕಾಣೋ ನಿತ್ಯ ನರಕದಲ್ಲಿ
ಕೃಪಣ ವತ್ಸಲ ನಮ್ಮ ವಿಜಯ ವಿಠ್ಠಲರೇಯ
ಕಪಿಲಾವತಾರ ಬಲ್ಲವಗೆ ಬಲು ಸುಲಭ || ೪ ||

ತಾಳ – ಆದಿ

ಬಲ ಹಸ್ತದಲ್ಲಿ ಯಜ್ಞಶಾಲೆಯಲ್ಲಿ ಕಂ
ಗಳಕಪ್ಪಿನಲ್ಲಿ ಹೃದಯಸ್ಥಾನ ನಾಭಿಯಲ್ಲಿ
ಜಲಧಿ ಗಂಗಾ ಸಂಗಮದಲ್ಲಿ ಗಮನದಲ್ಲಿ
ತುಲಸಿ ಪತ್ರದಲ್ಲಿ ತುರಗ ತುರುವಿನಲ್ಲಿ
ಮಲಗುವ ಮನೆಯಲ್ಲಿ ನೈವೇದ್ಯ ಸಮಯದಲ್ಲಿ
ಬಲುಕರ್ಮ ಬಂಧಗಳು ಮೋಚಕವಾಗುವಲ್ಲಿ
ಚಲುವನಾದವನಲ್ಲಿ ವಿದ್ಯೆ ಪೇಳುವನಲ್ಲಿ
ಫಲದಲ್ಲಿ ಪ್ರತಿಕೂಲವಿಲ್ಲದ ಸ್ಥಳದಲ್ಲಿ
ಬೆಳೆದ ದರ್ಭಗಳಲ್ಲಿ ಅಗ್ನಿಯಲ್ಲಿ ಹರಿವ
ಜಲದಲ್ಲಿ ಜಾಂಬುದ ನದಿಯಲ್ಲಿ ಶ್ಲೋಕದಲ್ಲಿ
ಬಲಿಮುಖ ಬಳಗದಲ್ಲಿ ಆಚಾರಶೀಲನಲ್ಲಿ
ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ
ಪೊಳೆವ ಮಿಂಚಿನಲ್ಲಿ ಬಂಗಾರದಲ್ಲಿ ಇನಿತು
ಕಾಲ ಕಾಲಕ್ಕೆ ಬಿಡದೆ ಸ್ಮರಿಸು ಕಪಿಲ ಪರಮಾತ್ಮನ್ನ
ಗೆಲವುಂಟು ನಿನಗೆಲವೊ ಸಂಸಾರದಿಂದ ವೇಗ
ಕಲಿಯುಗದೊಳಗಿದೆ ಕೊಂಡಾಡಿದವರಿಗೆ
ಖಳರ ಅಂಜಿಕೆಯಿಲ್ಲ ನಿಂದಲ್ಲೆ ಶುಭಯೋಗ
ಬಲವೈರಿನುತ ನಮ್ಮ ವಿಜಯ ವಿಠ್ಠಲರೇಯಾ
ಇಳೆಯೊಳಗೆ ಕಪಿಲಾವತಾರನಾಗಿ ನಮ್ಮ ಭಾರವಹಿಸಿದ || ೫ ||

ಜತೆ

ತಮ ಪರಿಚ್ಛೇದ ಈತನ ಸ್ಮರಣೆ ನೋಡು ಹೃ-
ತ್ಕಮಲದೊಳಗೆ ವಿಜಯ ವಿಠ್ಠಲನ್ನ ಚರಣಾಬ್ಜಾ || ೬ ||
****


vijaya dasa-ಮುಖ್ಯಪ್ರಾಣದೇವರ ಸ್ತೋತ್ರ ಸುಳಾದಿ ವಿಜಯದಾಸರು ಕೃತ 

ಶ್ರೀಮುಖ್ಯಪ್ರಾಣದೇವರ ಸ್ತೋತ್ರ ಸುಳಾದಿ (ಶ್ರೀ ವಿಜಯದಾಸರು ಕೃತ)
ಕೋತಿಯಾದರೆ ಬಿಡೆನೊ ಬಲುಪರಿ
ಭೂತಳದೊಳು ಪಾರ‍್ಯಾಡಲು ಬಿಡೆನೊ
ಖ್ಯಾತಿ ತೊರೆದು ಕಚ್ಚುಟ ಹಾಕಲು ಬಿಡೆನೊ
ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ
ಭೀತಿ ಬೀರಲು ಬಿಡೆನೊ ಮಾತು
ಮಾತಿಗೆ ಹಲ್ಲು ತೋರಲು ಬಿಡೆನೊ
ಗಾತುರ ಗಗನಕ್ಕೆ ಬೆಳಿಸಲು ಬಿಡೆನೊ
ಕೋತಿ ಸೇವಿಸಲು ಬಿಡೆನೊ
ಆತುರದಲಿ ವನಧಿ ಲಂಘಿಸಿದರೆ ಬಿಡೆ
ಆ ತರುಗಳ ಕಿತ್ತಲು ಬಿಡೆನೊ
ವೀತಿಹೊತ್ರನ ಬಾಲದಲ್ಲಿ ಇಟ್ಟರೆ ಬಿಡೆ
ಜಾತಿ ಧರ್ಮವ ಬಿಟ್ಟರೆ ಬಿಡೆನೊ
ಈ ತೆರದಲ್ಲಿ ನೀನು ಇದ್ದರೇನಯ್ಯಾ ಬೆ
ನ್ನಾತು ಕೇಳುವದು ನಾ ಬಿಡಬಲ್ಲೆನೇ
ತಾತಾ ಇನ್ನಿದರಿಂದ ಆವದಾದರು ಬರಲಿ
ದಾತಾ ಮತ್ತಿದರಿಂದ ಏನಾದರಾಗಲಿ
ಸೋತು ಹಿಂದೆಗದು ಪೋದರೆ ನಿನ್ನ ಪದದಾಣೆ
ಯಾತಕ್ಕೆ ಸಂಶಯವೊ ಬಿಡೆನೊ ಬಿಡೆನೊ ಖ-
ದ್ಯೋತ ಮಂಡಲ ಪೋಗಲು ಬಿಡೆನೊ
ಮಾತು ಪೊಳ್ಳಾದರೆ ನೂರೊಂದು ಕುಲ ಎನ್ನ
ಗೋತ್ರದವರಿಗೆ ಗತಿ ಎಲ್ಲೆದೋ
ವಾತನ್ನ ಮಗವಾತ ಆತನ್ನ ರೂಪವ
ಗಾತುರದಲ್ಲಿ ನಿನ್ನೊಳಗೆ ತೋರೊ
ಜ್ಯೋತಿರ್ಮಯ ರೂಪ ವಿಜಯವಿಠ್ಠಲರೇಯನ
ದೂತದುರ್ಜನಹಾರಿ ದುಃಖನಿವಾರಿ || ೧ ||

ತಾಳ – ಆಟ

ಭೂತಳದೊಳಗೆ ಇದ್ದ ಭೂಮಿ ಸುತ್ತಲು ಬಿಡೆ
ಭೀತನಾಮವನ್ನು ಇಟ್ಟುಕೊಂಡರೆ ಬಿಡೆ
ನೀ ತಿರಿದುಂಡರೆ ಬಿಡೆನೊ ಬಿಡೆನೊ ಅ
ರಾತಿಗಳಿಗೆ ಸೋತು ಅಡವಿ ಸೇರಲು ಬಿಡೆನೊ
ಸೋತುಮತನ ಬಿಟ್ಟು ಅಡಿಗಿ ಮಾಡಲು ಬಿಡೆ
ಘಾತಕ ನೀನಾಗಿ ಕುಲವ ಕೊಂದರೆ ಬಿಡೆ
ಮಾತುಗಾರಿಕೆಯಿಂದ ಯತಿಯಾದರೆ ಬಿಡೆನೊ
ಪ್ರೀತಿ ಸಲಹೊ ಎನ್ನ ಸಾಕದಿದ್ದರೆ ನಿನ್ನ
ಪೂತರೆ ದ್ವಿತಿಯೇಶನೆಂದು ಪೊಗಳಲ್ಯಾಕೆ
ನಾಥನಲ್ಲ ನಿನ್ನ ಮಂತ್ರಿತನವೇನೋ
ಪೋತಭಾವ ನಮ್ಮ ವಿಜಯ ವಿಠ್ಠಲರೇಯನ
ಆತುಮನದೊಳಗಿಟ್ಟ ಭಾರತೀರಮಣಾ || ೨ ||

ತಾಳ – ತ್ರಿವಿಡಿ

ಭಾರವೆ ನಾನೊಬ್ಬ ಶರಣಾ ನಿನಗಲ್ಲವೆ
ಬಾರಿ ಬಾರಿಗೆ ನಿನ್ನ ಅಹಿಕ ಸೌಖ್ಯ
ಮೀರದೆ ಕೊಡು ಎಂದು ಬೇಡಿ ಬ್ಯಾಸರಿಸು ವಿ
ಸ್ತಾರವಾಗಿ ಗುರುವೆ ಕಾಡಿದೆನೇ
ಧಾರುಣಿಯೊಳು ಪುಟ್ಟಿ ಪಾರುಗಾಣದ ಸಂ
ಸಾರಹೇಯವೆಂದು ಕೇಳಿ ನಿನಗೆ
ದೂರಿದೆನೂ ಇದು ದೈನ್ಯದಿಂದಲಿ ವಿ
ಚಾರಿಸಿದರೊಳಿತೆ ಇಲ್ಲದಿದ್ದರೆ ಲೇಸೆ
ಸಾರಿ ಸಾರಿಗೆ ನಿನ್ನ ಸೌಭಾಗ್ಯ ಚರಣವ
ತೋರಿಸಿ ಧನ್ಯನ್ನ ಮಾಡೆಂದೆನೋ
ಕಾರುಣ್ಯದಲಿ ಕೈಟಭಾರಿಪ್ರಿಯನೆ
ಆರನ್ನ ಕಾಣೆನೊ ನಿನ್ನ ವಿನಾ
ಕೀರುತಿ ಅಪಕೀರ್ತಿ ನಿನ್ನದಯ್ಯಾ
ವಾರಣಾವರವಂದ್ಯ ವಿಜಯ ವಿಠ್ಠಲರೇಯನ
ಸೇರುವ ಪರಿಮಾಡೊ ತಾರತಮ್ಯ ಭಾವದಲ್ಲಿ || ೩ ||

ತಾಳ – ಆಟ

ನೀನು ಒಲಿಯೇ ಹರಿ ತಾನೆ ಒಲಿವನಯ್ಯಾ
ನೀನು ಮುನಿದಡೆ ಹರಿ ತಾನೆ ಮುನಿವನು
ಏನೆಂಬೆ ನಿನ್ನ ಮೇಲಣ ಹರಿಕಾರುಣ್ಯ
ನೀನಲ್ಲದಿಲ್ಲದ ಸ್ಥಾನದಿ ತಾನಿಲ್ಲಾ
ಪ್ರಾಣೇಶ ನಮೋ ನಮೋ ನಿನ್ನ ಪಾದಾಬ್ಜಕ್ಕೆ
ವಾನರೇಶ ಸುಗ್ರೀವ ವಾಲಿಸಾಕ್ಷಿ
ಜ್ಞಾನೇಶ ಭಕ್ತಿ ವಿರಕ್ತೇಶ ಅಮರೇಶ
ಆನಂದ ಆನಂದ ಮೂರುತಿ ಗುರುರಾಯ
ಪಾಣಿಗ್ರಹಣ ಮಾಡು ಪತಿತಪಾವನ ದೇವ
ಪ್ರಾಣೇಂದ್ರಿಯಗಳು ದೇಹ ಚೇತನ ಚಿತ್ತವ
ಧ್ಯಾನ ಮಾಡಲಿ ಸರ್ವ ನಿನ್ನಾಧೀನವೆಂದು
ನೀನಿರೆಲಾವಾಗ ಅನ್ಯ ಜನರಿಗೆ ಮತ್ತಾನು
ಬಿನ್ನೈಪೇನೆ ದೇಹತ್ಯಾಗವಾಗಿ
ಶ್ರೀನಾಥ ವಿಜಯವಿಠ್ಠಲರೇಯನ ಪಾದ
ರೇಣು ಧರಿಸುವ ಸರ್ವರುದ್ಧಾರೀ || ೪ ||

ತಾಳ – ಆದಿ

ಎಲ್ಲ ಕಾಲದಲ್ಲಿ ನಿನ್ನಲ್ಲಿ ಭಕ್ತಿ ಇಪ್ಪ
ಸಲ್ಲಲಿತ ಮನುಜರ ಪದಪಾಂಸಶಿರ
ದಲ್ಲಿ ಧರಿಸುವಂತೆ ಸಂತತ ಮತಿಯಿತ್ತು
ಬಲ್ಲಿದ ಕಾಮ ಬಿಡಿಸು ಬಲವಂತ ಗುಣವಂತ
ಬಲ್ಲವ ಭವದೂರ ನೀನೆ ಗತಿಯೊ ಜಗ
ದೊಲ್ಲಭ ಮುಂದಣ ವಾಣೀಶ ಸುಖಪೂರ್ಣ
ಅಲ್ಲದಿದ್ದರೆ ಎನ್ನ ಕಾವ ಕರುಣಿಯ ಕಾಣೆ
ಮಲ್ಲಮರ್ದನ ನಮ್ಮ ವಿಜಯವಿಠ್ಠಲರೇಯನ
ನಿಲ್ಲಿಸಿ ಮನದಲ್ಲಿ ಪ್ರತಿಕೂಲವಾಗಿದೆ || ೫ ||

ಜತೆ

ಅನಂತ ಜನುಮಕ್ಕೆ ನೀನೆ ಗುರು ಎಂಬ
ಜ್ಞಾನವೇ ಕೊಡು ಜೀಯಾ ವಿಜಯವಿಠ್ಠಲದಾಸಾ || ೬ ||
****




By vijaya dasaru ನೃಸಿಂಹ ಸ್ತೋತ್ರ ಸುಳಾದಿ-ವಿಜಯದಾಸರು 

ನೃಸಿಂಹ ಸ್ತೋತ್ರ ಸುಳಾದಿ-ವಿಜಯದಾಸರು 
ರಾಗ – ನಾಟಿ    ತಾಳ – ಧ್ರುವ

ವೀರ ಸಿಂಹನೆ ನಾರಸಿಂಹನೆ ದಯ ಪಾರಾ
ವಾರನೆ ಭಯ ನಿವಾರಣ ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಬೇರರಿಸಿ ಕೀಳುವ ಬಿರಿದು ಭಯಂಕರ
ಘೋರವತಾರ ಕರಾಳವದನ ಅ-
ಘೋರ ದುರಿತ ಸಂಹಾರ ಮಾಯಾಕಾರ
ಕ್ರೂರದೈತ್ಯರ ಶೋಕ ಕಾರಣ ಉದುಭವ
ಈರೇಳು ಭುವನ ಸಾಗರದೊಡೆಯ
ಅರೌದ್ರನಾಮಕ ವಿಜಯ ವಿಠ್ಠಲ ನರಸಿಂಗ
ವೀರರ ಸಾತುಂಗ ಕಾರುಣ್ಯಪಾಂಗ || ೧ ||


ತಾಳ – ಮಟ್ಟ

ಮಗುವನು ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದು ನಗಪನ್ನಗ ವನಧಿ
ಗಗನ ಮಿಗಿಲಾದ ಅಗಣಿತ ಬಾಧಿಯಲಿ
ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು ಹೇ
ಜಗದ ವಲ್ಲಭನೇ ಸುಗುಣಾನಾದಿಗನೆ
ನಿಗಮಾ ವಂದಿದತೆ ಪೊಗಳಿದ ಭಕುತರ
ತಗಲಿ ತೊಲಗನೆಂದೂ ಮಿಗೆ ಕೂಗುತಲಿರಲು
ಯುಗ ಯುಗದೊಳು ದಯಾಳುಗಳ ದೇವರದೇವ
ಯುಗಾದಿ ಕೃತನಾಮಾ ವಿಜಯ ವಿಠ್ಠಲ ಹೋ ಹೋ
ಯುಗಳ ಕರವ ಮುಗಿದು ಮಗುವು ಮೊರೆ ಇಡಲು || ೨ ||


ತಾಳ – ರೂಪಕ

ಕೇಳಿದಾಕ್ಷಣದಲಿ ಲಾಲಿಸಿ ಭಕ್ತನ್ನ ಮೌಳಿ 
ವೇಗದಲಿ ಪಾಲಿಸುವೆನೆಂದು
ತಾಳಿಸಂತೋಷವ ತೂಳಿ ತುಂಬಿದಂತೆ
ಮೂಲೋಕದಪತಿವಾಲಯದಿಂದ ಸು
ಸ್ತೀಲ ದುರ್ಲಭ ನಾಮ ವಿಜಯ ವಿಠ್ಠಲ ಪಂಚ
ಮೌಳಿ ಮಾನವ ಕಂಭ ಸೀಳಿ ಮೂಡಿದ ದೇವ || ೩ ||

ತಾಳ – ಝಂಪೆ

ಲಟಲಟಾ ಲಟಲಟಾ ಲಟಕಟಿಸಿ ವನಜಾಂಡ
ಕಟಹ ಪಟ ಪಟ ಪುಟುತ್ಕಟದಿ ಬಿಚ್ಚುತಲಿರಲು
ಪುಟ ಪುಟ ಪುಟನೆಗೆದು ಚೀರಿಹಾರುತ್ತ ಪ-
ಲ್ಕಟಾಕಟಾ ಕಟ ಕಡಿದು ರೋಷದಿಂದ
ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಊರ್ಭಟಗೆ ಅರ್ಭಟವಾಗಿರಲು
ಕುಟಿಲ ರಹಿತ ವ್ಯಕ್ತ ವಿಜಯ ವಿಠ್ಠಲ ಶಕ್ತ
ದಿಟಿ ನಿಟಿಲ ನೇತ್ರ ಸುರಕಟಕ ಪರಿಪಾಲಾ || ೪ ||

ತಾಳ – ತ್ರಿವಿಡಿ

ಬೊಬ್ಬಿರಿಯೇ ವೀರ ಧ್ವನಿಯಿಂದ ತನಿಗಿಡಿ
ಹಬ್ಬಿ ಮುಂಚೋಣಿ ಉರಿ ಹೊರಗೆದ್ದು ಸುತ್ತೆ
ಉಬ್ಬಸ ರವಿಗಾಗೆ ಅಬ್ಜ ನಡುಗುತಿರೆ
ಅಬ್ಧಿಸಪುತ ಉಕ್ಕಿ ಹೊರಚೆಲ್ಲಿ ಬರುತಿರೆ
ಅಬುಜ ಭವಾದಿಗಳು ತಬ್ಬಬ್ಬಿ ಗೊಂಡಾರಿ
ಅಬ್ಬರವೇನೆನುತ ನಭದ ಗೂಳೆಯು ತಗೆಯೆ
ಶಬ್ದ ತುಂಬಿತು ಅವ್ಯಾಕೃತಾಕಾಶ ಪರಿಯಂತ
ನಿಬ್ಬರ ತರುಗಿರಿ ಝರಿ ಝರಿಸಲು
ಒಬ್ಬರಿಗೊಶವಲ್ಲದ ನಮ್ಮಾ ವಿಜಯ ವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟಾ || ೫ ||

ತಾಳ – ಅಟ್ಟ

ಘಡಿಘಡಿಸುತ ಕೋಟಿ ಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಡುಹಿ ತುಡುಕಿ
ತೊಡೆಯ ಮೇಲಿರಿಸಿ ಹೇರೊಡಲ ಕೂರುಗುರದಿಂದ
ಪಡುವಲ ಗಡಲ ತಡಿಯ ತರಣಿಯ ನೋಡಿ
ಕಡುಕೋಪದಲ್ಲಿ ಸದಬಡಿದು ರಕ್ಕಸನ ಕೆಡಹಿ
ನಿಡಿಗರಳನು ಕೊರಳೆಡಿಯಲ್ಲಿ ಧರಿಸಿದ ಸಡಗರದ ದೈವ
ಕಡುಗಲಿ ಭೂರ್ಭೂವ ವಿಜಯ ವಿಠ್ಠಲ
ಪಾಲ್ಗಡಲೊಡೆಯಾ ಶರಣರ ವಡೆವೆ ವಡನೊಡನೆ || ೬ ||

ತಾಳ – ಆದಿ

ಉರಿಮಸೆಗೆ ಚತುರ್ದಶ ಧರಣಿ ತಲ್ಲಣಿಸಲು
ಪರಮೇಷ್ಟಿ ಹರಸುರರು ಸಿರಿದೇವಿಗೆ ಮೊರೆಯಿಡಲು
ಕರುಣದಿಂದಲಿ ತನ್ನ ಶರಣನ್ನ ಸಹಿತ ನಿನ್ನ
ಚರಣಕ್ಕೆ ಎರಗಲು ಪರಮ ಶಾಂತನಾಗಿ
ಹರಹಿದೆ ದಯವನ್ನು ಸುರರು ಕುಸುಮ ವರುಷ
ಗರಿಯಲು ಭೇರಿ ವಾದ್ಯ ಮೊರೆ ಉತ್ತರರೆ ಎನುತ
ಪರಿಪರಿ ವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರ ಹರಿಸಿ ಬಾಲಕನ ಕಾಯ್ದೆ
ಪರದೈವೆ ಗಂಭೀರಾತ್ಮ ವಿಜಯವಿಠ್ಠಲ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲ || ೭ ||

ಜತೆ


ಪ್ರಹ್ಲಾದವರದ ಪ್ರಸನ್ನ ಕ್ಲೇಶಭಂಜನ್ನ
ಮಹಹವಿಷೆ ವಿಜಯವಿಠ್ಠಲ ನರಮೃಗವೇಷಾ || ೮ ||

*****



Vijaya daasa kruta 
ಶ್ರೀಧನ್ವಂತರಿ ಸುಳಾದಿ ಶ್ರೀ ವಿಜಯದಾಸರು ಕೃತ


Dhanvantari SuLaadi ಶ್ರೀಧನ್ವಂತರಿ ಸುಳಾದಿ (ಶ್ರೀ ವಿಜಯದಾಸರು ಕೃತ)

ರಾಗ – ಭೈರವಿ    ತಾಳ – ಧ್ರುವ

ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು

ಕಾಯಾ ನಿರ್ಮಲಿನಾ ಕಾರಣವಾಹದೋ
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕಕರ್ತ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪಾ-
ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ
ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ || 1 ||

ತಾಳ – ಮಟ್ಟ


ಧನ್ವಂತ್ರಿ ಶ್ರೀಧನ್ವಂತ್ರಿ ಎಂದು

ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆದ
ಮನ್ನೂಜ ಭುವನದೊಳು ಧನ್ಯನು ಧನ್ಯನೆನ್ನಿ
ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠ-
ಲನ್ನಸತ್ಯವೆಂದು ಬಣ್ಣಿಸು ಬಹು ವಿಧದಿ || 2 ||

ತಾಳ – ತ್ರಿವಿಡಿ


ಶಶಿಕುಲೋದ್ಭವ ದೀರ್ಘತಮ ನಂದನ ದೇವಾ

ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೂದೆ ತಾಪ ಓ-
ಡಿಸುವೌಷಧಿ ತುಲಸಿ ಜನಕ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೊ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ || 3 ||

ತಾಳ – ಆಟ


ಶರಣು ಶರಣು ಧನ್ವಂತರಿ ತಮೋಗುಣ ನಾಶಾ

ಶರಣು ಆರ್ತಜನ ಪರಿಪಾಲಕ ದೇವಾ
ತರುವೆ ಭವ ತಾಪ ತರುಣ ದಿತಿಸುತ
ಹರಣ ಮೋಹಕ ಲೀಲಾ ಪರಮ
ಪೂರ್ಣ ಬ್ರಹ್ಮಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರಗಶಾಯಿ
ವರಕಿರೀಟ ಮಹಾಮಣಿ ಕುಂಡಲಕರ್ಣ
ಮಿರುಗುವ ಹಸ್ತ ಕಂಕಣ ಹಾರಪದಕ ತಾಂ-
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯ ವಿಟ್ಠಲರೇಯಾ
ತರುಣಗಾತರ ಜ್ಞಾನ ಮುದ್ರಾಂಕಿತ ಹಸ್ತಾ || 4 ||

ತಾಳ – ಆದಿ

ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ

ಬೀಳುವಾಗಲಿ ನಿಂತು ಕುಳಿತಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ-
ಮ್ಮೇಳವಾಗಲಿ ಮೇಲು ಪುತ್ರಾದಿ ಒಡೆಯೊಡನೆ
ಖೇಳವಾಗಿ ಮನುಜ ಮರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವ್ಯಾಳಿ ವ್ಯಾಳಿಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ || 5 ||

ಜತೆ

ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲವೊಲಿವಾ || 6 ||
*****




vijaya dasa ಶ್ರೀದುರ್ಗಾದೇವೀ ಸ್ತೋತ್ರ ಸುಳಾದಿ ಶ್ರೀ ವಿಜಯದಾಸರು ಕೃತ



ಶ್ರೀದುರ್ಗಾದೇವೀ ಸ್ತೋತ್ರ ಸುಳಾದಿ (ಶ್ರೀ ವಿಜಯದಾಸರು ಕೃತ)

ತಾಳ – ಧ್ರುವ

ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೆ ದುರ್ಗೆ ಮಹಾ ದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯ ದುರ್ಧಕ್ಷೆ ಶಕ್ತಿ
ದುರ್ಗಕಾನನ ಗಹನ ಪರ್ವತಘೋರ ಸರ್ಪ
ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನಿರ್ಗುಡಿದಂತೆ ಲೋಕ ಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಮ ಮಾಡಿ ಬದುಕುವಂತೆ ಮಾಡು || ೧ ||

ತಾಳ – ಮಟ್ಟ

ಅರಿದರಾಂಕುಶ ಶಕ್ತಿ ಪರಶು ನೇಗಲಿಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪ ಸುಖಕೊಡುವ
ಸಿರಿಭೂಮಿ ದುರ್ಗಾ ಸರ್ವೋತ್ತಮ ನಮ್ಮ
ವಿಜಯ ವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ || ೨ ||

ತಾಳ -ತ್ರಿವಿಡಿ

ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ
ನ್ನತ ಬಾಹು ಕರಾಳವದನೆ ಚಂದಿರೆ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೇ ಭವ್ಯೇ
ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿ ಗಮನೆ ಅ
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿ ತನಯೆ ಸ
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿ ಜಾತೆ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರ ನಯನೆ ನಿರುತಕನ್ಯೇ ಉದಯಾರ್ಕ
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೆ ಅ
ಪ್ರತಿಹತೆ ಸರ್ವದಾ ಸಂಚಾರಿಣಿ ಹ್ರೀ
ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ
ಪತಿತಪಾವನೆ ರನ್ನೆ ಸರ್ವೋಷಧಿಯಲಿದ್ದು
ಹತಮಾಡು ಕಾಡುವ ರೋಗಗಳಿಂದ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿ ಬೇಕು ದುರ್ಗೇ ದುರ್ಗೇ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ || ೩ ||

ತಾಳ – ಅಟ್ಟ

ಶ್ರೀಲಕ್ಷ್ಮೀಕಮಲಾ ಪದ್ಮಾಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯಾವೃದ್ಧಿವಿ
ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ
ಶೀಲೆ ಸುಗಂಧ ಸುಂದರಿ ವಿದ್ಯಾಸುಶೀಲೆ
ಸುಲಕ್ಷಣ ದೇವಿ ನಾನಾ ರೂಪಂಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲ ಕಾಲಕೆ ಎನ್ನ ಭಾರ ವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೊಪುದು
ಏಳಲ ಮಾಡದೆ ಉದ್ಧಾರ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯ ವಿಠ್ಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ || ೪ ||

ತಾಳ – ಆದಿ

ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಪತ್ರಯ ವಿನಾಶ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ
ವ್ಯಾಪುತ ಧರ್ಮಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಾಪದದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು ಹಾರೆ ಪೋಗೋವು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ಪಾಂಡವರ ಮನೋಭಿಷ್ಟೆ
ಈ ಪಂಚ ಭೌತಿಕದಲ್ಲಿ ಆವ ಸಾಧನೆ ಕಾಣೇ
ಶ್ರೀಪತಿ ನಾಮ ಒಂದೇ ಜಿಹ್ವಾಗ್ರದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೇ
ತಾಪಸ ಜನಪ್ರೀಯ ವಿಜಯವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾ ವರ್ಣಿಶ್ರಯೆ || ೫ ||

ಜತೆ

ದುರ್ಗೆ ಹಾ ಹೇ ಹೋ ಹಾಃ ದುರ್ಗೆ ಮಂಗಳ ದುರ್ಗೆ
ದುರ್ಗೆತಿ ಕೊಡದಿರು ವಿಜಯವಿಠ್ಠಲಪ್ರೀಯೆ || ೬ ||
****



ಶ್ರೀ ರಾಘವೇಂದ್ರಸ್ತೋತ್ರ ಸುಳಾದಿ


ರಾಗ – ನಾದನಾಮಕ್ರಿಯಾ ಧ್ರುವತಾಳ

ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |

ಇರುತಿಪ್ಪ ವಿವರ ಅರಿತಷ್ಟು ವರಣಿಸುವೆ |
ಸ್ಥಿರವಾಗಿ ಮಂತ್ರಾಲಯ ಪುರ ತುಂಗಾತೀರದಿ |
ಹರಿಭಕ್ತ ಪ್ರಹ್ಲಾದ ವರಯಾಗ ಮಾಡಿ ಇಲ್ಲಿ |
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯೆ ಮಾಡಿ |
ಪರಿಶುದ್ಧನಾದನೆಂದು ಅರಿದು ಈ ಸ್ಥಳದಲ್ಲಿ |
ಗುರುರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ |
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು |
ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ |
ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತ |
ಹರಿ ನುಡಿದನು ಇವರ ಪರಮ ದಯಾಳು ತಾನು |
ಗುರುವಂತರ್ಯಾಮಿಯಾಗಿ ವರವಾನೀಯಲು ಜಗಕೆ |
ನರಹರಿ ತಾನೆ ನಿಂದು ನಿತ್ಯಪೂಜೆಯಗೊಂಡು |
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರಧರ |
ನಾರಾಯಣ ತಾನೆ ವರಸನ್ನಿಧಾನನಾಗಿ |
ಇವರಿಗೆ ಫಲತಂದೀವ ಇಹಪರದಲ್ಲಿನ್ನು ।
ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ ಶರಣರ |
ಪೊರೆವಂಥ ಚರಿಯಾ ಪರಿಪರಿ ಉಂಟು || ೧ ||

ಮಟ್ಟತಾಳ


ನರಹರಿ ಕೃಷ್ಣ ರಾಮ ಸಿರಿವೇದವ್ಯಾಸ |

ಎರಡೆರಡು ನಾಲ್ಕು ಹರಿಯ ಮೂರುತಿಗಳು |
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು |
ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ |
ತರುವಾಯದಲಿನ್ನು ತಾರತಮ್ಯನುಸಾರ |
ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ |
ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |
ಪರಿಪರಿ ಪುರಾಣಭಾರತಾಗಮದಲ್ಲಿ  |
ಸರಿಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನ ರಂಗ ಗೋಪಾಲವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || ೨ ||

ತ್ರಿವಿಡಿತಾಳ


ನರಹರಿರೂಪನಾಗಿ ವಾಸವಾಗಿ ಇಲ್ಲಿ |

ದುರಿತ ದುಷ್ಕೃತ ಬ್ರಹ್ಮಹತ್ಯೆ ಗಳೋಡಿಸುವ |
ಸಿರಿರಾಮನಾಗಿಲ್ಲಿ ಪರಿ ಪರಿ ಪರಿ ದೇಶಾಂ- |
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ |
ಸ್ಥಿರಪಟ್ಟ ಕಟ್ಟುವ ಸಿರಿ ಕೃಷ್ಣನಾಗಿವಾಸವಾಗಿಇಲ್ಲಿ |
ಪರಿಪರಿಯಲಿ ಬಂದ ಪರಮಾತುರರಿಗೆ |
ವರವೀವ ಪುತ್ರೋತ್ಸವ ಮುಂಜಿ ಮದುವೆಯ |
ಹರಕೆಗಳ ಕೈಕೊಂಡು ಹರುಷ ಬಡಿಸುವವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ |
ದುರುವಾದಿಗಳನೆಲ್ಲ ಧುರದಿಂದಲೋಡಿಸಿ |
ಮುರಿದು ಅವರ ಕುಶಾಸ್ತ್ರ ,ವ ಹರಿಸರ್ವೋತ್ತಮನೆಂದು |
ಇರುವನಿಲ್ಲಿ ತೋರಿ ಶರಣಜನಕೆ ಇನ್ನು |
ವರ ಜ್ಞಾನ ಸುಧೆಯನು ಕರೆದು ಕೊಡುತಲಿಪ್ಪ |
ಸಿರಿ ವಂದಿತಪಾದ ಗೋಪಾಲವಿಠ್ಠಲ |
ಪರಿಪರಿಯಲಿ ಇಲ್ಲಿ ವಾಲಗ ಕೈಕೊಂಬ || ೩ ||

ಅಟ್ಟತಾಳ


ರಾಘವೇಂದ್ರನೆಂಬ ರೂಪವೇ ತಾನೇ ಆಗಿ |

ರಾಘವೇಂದ್ರನೆಂಬ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥ ಅಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರ ಮೂರ್ತಿ ಗೋಪಾಲವಿಠ್ಠಲ ।
ಭಾಗವತರಲ್ಲಿ ಬಹು ಪೂಜೆಯನುಗೊಂಬ || ೪ ||

ಆದಿತಾಳ


ದಿನದಿನಕಿಲ್ಲಿ ನೂತನ ಪೂಜೆಗಳಾಗುವವು |

ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು |
ದಿನದಿನಕಿಲ್ಲಿ ನೂತನ ಕೀರ್ತಿಗಳಾಗುವವು|
ದಿನದಿನಕಿಲ್ಲಿ ನೂತನ ಉತ್ಸವಗಳಾಗುವವು |
ಜನರ ಸಂದಣಿ ಪ್ರತಿದಿನ ವಿಪ್ರಭೋಜನ |
ಜನನಾಥ ತಾನಿಲ್ಲಿ ಅನುವಾಗಿ ತಾನಿಂದು |
ಘನ ಮಹಿಮೆಯಿಂದಲಿ |
ಜನರ ಪಾಲಿಸುವದಕ್ಕನುಮಾನ ಸಲ್ಲದೊ |
ಗುಣಗಣ ಪರಿಪೂರ್ಣ ಗೋಪಾಲವಿಠ್ಠಲ |
ಅಣೋರಣಿ ಎಂಬುವಗೆ ಎಣೆಯಾರೊ ಜಗದೊಳಗೆ || ೫ ||

ಜತೆ


ಮಂತ್ರಸಿಧ್ಧಿಕ್ಷೇತ್ರ ಇದು ನೋಡಿ ಕೋವಿದರು |

ಮಂತ್ರಪ್ರತಿಪಾದ್ಯ ಗೋಪಾಲವಿಠ್ಠಲನಿಂದ || ೬ ||
************

for more

check here for 500+ suladi 


ಋಣ ವಿಮೋಚನ ಸುಳಾದಿ runa vimochana suladi
ಹಬ್ಬ ಸುಳಾದಿ
ನಾಡಿ ಪ್ರಕರಣ ಸುಳಾದಿ
ಶ್ರೀನಿವಾಸ ಸುಳಾದಿ srinivasa suladi
ಕಂಚಿ ವರದರಾಜ ಸುಳಾದಿ ೧ ಕಂಚಿ ವರದರಾಜ ಸುಳಾದಿ - 2
ಶ್ರೀವ್ಯಾಸರಾಜರ ಮೇಲೆ  ಸ್ತೋತ್ರಸುಳಾದಿ
ಶ್ರೀ ಜಯತೀರ್ಥರ ಸ್ತೋತ್ರ ಸುಳಾದಿ
and many more
****





No comments:

Post a Comment