Sunday 1 September 2019

ಶ್ರೀ ರಾಮ ಸ್ತೋತ್ರಮ್ ಜಟಾಯು ವಿರಚಿತಮ್ sri rama stotram by jatayu

ಜಟಾಯುಕೃತ ಶ್ರೀರಾಮ ಸ್ತೋತ್ರಮ್ – ಅರ್ಥಸಹಿತ

ಅಗಣಿತಗುಣಮಪ್ರಮೇಯಮಾದ್ಯಂ |
ಸಕಲಜಗತ್ ಸ್ಥಿತಿಸಂಯಮಾದಿ ಹೇತುಂ ||
ಉಪರಮಪರಮಂ ಪರಾತ್ಮಭೂತಂ |
ಸತತಮಹಂ ಪ್ರಣತೋsಸ್ಮಿ ರಾಮಚಂದ್ರಮ್ ||೧||


ನಿರವಧಿಸುಖಮಿಂದಿರಾಕಟಾಕ್ಷಂ |
ಕ್ಷಪಿತಸುರೇಂದ್ರ ಚತುರ್ಮುಖಾದಿ ದು:ಖಂ ||
ನರವರಮನಿಶಂ ನತೋsಸ್ಮಿ ರಾಮಂ |
ವರದಮಹಂ ವರಚಾಪ ಬಾಣಹಸ್ತಮ್ ||೨||

ತ್ರಿಭುವನಕಮನೀಯರೂಪಮೀಡ್ಯಂ |
ರವಿಶತಭಾಸುರಮೀಹಿತಪ್ರದಾನಂ ||
ಶರಣದಮನಿಶಂ ಸುರಾಗನೂಲೆ |
ಕೃತನಿಲಯಂ ರಘುನಂದನಂಪ್ರಪದ್ಯೇ ||೩||

ಭವವಿಪಿನದವಾಗ್ನಿ ನಾಮಧೇಯಂ |
ಭವಮುಖದೈವತದೈವತಂ ದಯಲುಂ |
ದನುಜಪತಿ ಸಹಸ್ರ ಕೋಟಿನಾಶಂ |
ರವಿತನಯಾಸದೃಶಂ ಹರಿಂ ಪ್ರಪದ್ಯೇ ||೪||

ಅವಿರತಭವ ಭಾವನಾತಿ ದೂರಂ |
ಭವಮುಖೈರ್ಮುನಿಭಿ:ಸದೈವ ದೃಶ್ಯಮ್ ||
ಭವಜಲಧಿಸುತಾರಣಾಂಘ್ರಿಪೋತಂ |
ಶರಣಮಹಂ ರಘುನಂದನಂ ಪ್ರಪದ್ಯೇ ||೫||

ಗಿರಿಶಗಿರಿಸುತಾಮನೋನಿವಾಸಂ |
ಗಿರಿವರ ಧಾರಿಣಮೀಹಿತಾಭಿರಾಮಂ ||
ಸುರವರದನುಜೇಂದ್ರ ಸೇವಿತಾಂಘ್ರಿಂ |
ಸುರವರದಂ ರಘುನಾಯಕಂ ಪ್ರಪದ್ಯೇ ||೬||

ಪರಧನ ಪರದಾರಾವರ್ಜಿತಾನಾಂ |
ಪರಗುಣಭೂತಿಷು ತುಷ್ಟಮಾನಸಾನಾಂ ||
ಪರಹಿತನಿರತಾತ್ಮಾನಾಂ ಸುಸೇವ್ಯಂ |
ರಘುವರಮಂಬುಜಲೋಚನಂ ಪ್ರಪದ್ಯೇ ||೭||

ಸ್ಮಿತರುಜಿರವಿಕಾಸಿತಾನನಾಬ್ಜ- |
ಮತಿಸುಲಭಂ ಸುರರಾಜ ನೀಲನೀಲಮ್ ||
ಸಿತಜಲರುಹ ಚಾರು ನೇತ್ರ ಶೋಭಂ |
ರಘುಪತಿಮೀಶಂ ಗುರೋರ್ಗುರುಂ ಪ್ರಪದ್ಯೇ ||೮||

ಹರಿಕಮಲಜ ಶಂಭುರೂಪಭೇದಾತ್ವ- |
ಮಿಹ ವಿಭಾಸಿಗುಣತ್ರಯಾನುವೃತ್ತ: ||
ರವಿರಿವ ಜಲಪೂರಿತೋದ ಪಾತ್ರೇಷ್ವ- |
ಮರಪತಿಸ್ತುತಿ ಪಾತ್ರಮೀಶಮೀಡೆ ||೯||

ರತಿಪತಿಶತಕೋಟಿ ಸುಂದರಾಂಗಂ |
ಶತಪಥ ಗೋಚರ-ಭಾವನಾವಿಧೂರಂ ||
ಯತಿಪತಿ ಹೃದಯೇ ಸದಾ ವಿಭಾತಂ |
ರಘುಪತಿಮಾರ್ತಿಹರಂ ಪ್ರಭುಂ ಪ್ರಪದ್ಯೇ ||೧೦||

ಇತ್ಯೇವಂ ಸ್ತುವತಸ್ತಸ್ಯ ಪ್ರಸನ್ನೋಭೂದ್ರಘೂತ್ತಮ: |
ಉವಾಚ ಗಚ್ಚ ಭದ್ರಂತೇ ಮಮ ವಿಷ್ಣೋ: ಪರಂ ಪದಮ್ ||೧೧||

ಶೃಣೋತಿ ಯದಿದಂ ಸ್ತೋತ್ರಂ ಲಿಖೇದ್ವಾನಿಯತ: ಪಠೇತ್ |
ಸ ಯಾತಿ ಮಮ ಸಾರೂಪ್ಯಂ ಮರಣೇಮತ ಸ್ಮೃತಿಂ ಲಭೇತ್ ||೧೨||

|| ಇತಿ ಜಟಾಯುಕೃತ ಶ್ರೀರಾಮ ಸ್ತೋತ್ರಮ್ ||
*************

ರಾವಣನ ಸೀತೆಯನ್ನು ಅಪಹರಿಸಿ ಒಯ್ಯುತ್ತಿರುವಾಗ ಜಟಾಯು ಇದನ್ನು ಕಂಡನು. ರಾಮ ಲಕ್ಷ್ಮಣರೊಂದಿಗೆ ಸ್ನೇಹದಿಂದ ಇದ್ದ ಜಟಾಯು ಶಕ್ತಿ ಸಂಪನ್ನನಾಗಿದ್ದರೂ ಮುದುಕನಾಗಿ ಇದ್ದುದ್ದರಿಂದ ಹೇಗೆ ಎದುರಿಸಬೇಕೆಂದು ತಿಳಿಯದೇ ಹೋದನು.ಸೀತೆಯ ಅಳುವಿಕೆಯನ್ನು ನೋಡಿ ವಿಷಯ ತಿಳಿದು ರಾವಣನಿಗೆ ಎದುರಾಗಿ ಬಂದನು. ಪರಸ್ತ್ರೀಯನ್ನು ಅಪಹರಿಸುವುದು ಬೇಡವೆಂದು ಎಚ್ಚರಿಸಿದನು. ರಾವಣನ ರಥವನ್ನು ತಡೆದನು. ರಾವಣನಿಗೆ ರೆಕ್ಕೆಗಳಿಂದ ಬಲವಾಗಿ ಘಾಸಿ ಮಾಡಿದನು. ಸಾಯುವ ಮುನ್ನ ರಾಮ ಲಕ್ಷ್ಮಣರಿಗೆ ನಿಜಸಂಗತಿ ತಿಳಿಸಿ ಜಟಾಯು ಕೊನೆಯುಸಿರೆಳೆದ. ಈ ಜಟಾಯುವಿಗೆ ರಾಮನ ಮೇಲೆ ಅಪಾರ ಭಕ್ತಿ ಅವನ ಕುರಿತು ಸ್ತೋತ್ರಗೈದು ಸ್ತುತಿಸಿದ್ದಾನೆ. ಆ ಸ್ತೋತ್ರವನ್ನು ಇಂದು ಅರ್ಥಸಹಿತ ನೋಡೋಣ.

ಅಗಣಿತಗುಣಮಪ್ರಮೇಯಮಾದ್ಯಂ |
ಸಕಲಜಗತ್ ಸ್ಥಿತಿಸಂಯಮಾದಿ ಹೇತುಂ ||
ಉಪರಮಪರಮಂ ಪರಾತ್ಮಭೂತಂ |
ಸತತಮಹಂ ಪ್ರಣತೋsಸ್ಮಿ ರಾಮಚಂದ್ರಮ್ ||೧||

ಏಣಿಸಲಾರದಷ್ಟು ಗುಣಗಳನ್ನು ಹೊಂದಿರುವಾತನೂ, ದೇಶಕಾಲಾದಿಗಳಿಗೆ ಹೊರತಾಗಿರುವವನೂ, ಪುರಾಣಪುರುಷನೂ, ಸಮಸ್ತ ವಿಶ್ವದ ಪರಿಪಾಲನೆಗೆ ನಿಮಿತ್ತ ಮಾತ್ರನೂ, ಅತ್ಯಂತ ಶಾಂತನೂ, ಸಾಕ್ಷಾತ್ ಪರಮಾತ್ಮನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.

ನಿರವಧಿಸುಖಮಿಂದಿರಾಕಟಾಕ್ಷಂ |
ಕ್ಷಪಿತಸುರೇಂದ್ರ ಚತುರ್ಮುಖಾದಿ ದು:ಖಂ ||
ನರವರಮನಿಶಂ ನತೋsಸ್ಮಿ ರಾಮಂ |
ವರದಮಹಂ ವರಚಾಪ ಬಾಣಹಸ್ತಮ್ ||೨||

ಅಂತ್ಯರಹಿತ ಸುಖಸ್ವರೂಪನೂ, ಲಕ್ಷ್ಮಿಯ ಶೃಂಗಾರಮಯ ನೋಟಕ್ಕೆ ಪಾತ್ರನಾದವನೂ, ಬ್ರಹ್ಮೇಂದ್ರಾದಿ ದೇವತಾ ಸಮೂಹದ ದು:ಖಗಳನ್ನು ದೂರೀಕರಿಸಿದವನೂ, ಹಸ್ತಗಳಲ್ಲಿ ಶ್ರೇಷ್ಠವಾದ ಬಿಲ್ಲು ಬಾಣಗಳನ್ನು ಧರಿಸಿರುವವನೂ, ಮಾನವರೂಪಿಗಳಲ್ಲಿ ಅತಿ ಶ್ರೇಷ್ಠನೂ, ಭಕ್ತರಿಗೆ ವರದಾಯಕನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ಅನವರತ ನಮಿಸುವೆನು.

ತ್ರಿಭುವನಕಮನೀಯರೂಪಮೀಡ್ಯಂ |
ರವಿಶತಭಾಸುರಮೀಹಿತಪ್ರದಾನಂ ||
ಶರಣದಮನಿಶಂ ಸುರಾಗನೂಲೆ |
ಕೃತನಿಲಯಂ ರಘುನಂದನಂಪ್ರಪದ್ಯೇ ||೩||

ಮೂರುಲೋಕಂಗಳಲ್ಲಿ ಅತಿ ಸುಂದರರೂಪಿಯೂ, ನೂರು ಸೂರ್ಯರ ತೇಜಸ್ಸನ್ನು ಹೊಂದಿರುವಾತನೂ, ಭಕ್ತರ ಇಷ್ಟಾರ್ಥಗಳನ್ನು ದಯಪಾಲಿಸುವಾತನೂ,ಶರಣಾರ್ಥಿಗಳಿಗೆ ಆಶ್ರಯದಾತನೂ, ದೊರೆಯೂ, ಅನುರಾಗದ ನೆಲೆಯಾದ ಪವಿತ್ರಾಂತ:ಕರಣದಲ್ಲಿ ನಿರಂತರವೂ ನೆಲೇಸಿರುವಾತನೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.

ಭವವಿಪಿನದವಾಗ್ನಿ ನಾಮಧೇಯಂ |
ಭವಮುಖದೈವತದೈವತಂ ದಯಲುಂ |
ದನುಜಪತಿ ಸಹಸ್ರ ಕೋಟಿನಾಶಂ |
ರವಿತನಯಾಸದೃಶಂ ಹರಿಂ ಪ್ರಪದ್ಯೇ ||೪||

ಸಂಸಾರರೂಪೀ ಘೋರಾರಣ್ಯವನ್ನು ಸುಡುವ ಕಾಡ್ಗಿಚ್ಚೆಂಬ ಹೆಸರನ್ನು ಹೊತ್ತವನೂ, ಹರನೇ ಆದಿಯಾದ ದೇವರ್ಕಳ ಸಮೂಹಕ್ಕೆ ಮಹಾದೇವನಾದವನೂ, ದಯಾವಂತನೂ, ಸಹಸ್ರಾರು ಕೋಟಿ ದಾನವರನ್ನು ನಾಶಗೊಳಿಸಿದಾತನೂ, ಸೂರ್ಯತನಯೆಯಾಗಿರುವ ಯಮುನಾ ನದಿಯವರ್ಣವನ್ನು ಹೋಲುವ ಶರೀರವುಳ್ಳಾತನೂ ಶ್ರೀಹರಿ ರೂಪಿಯೂ ಆಗಿರುವ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.

ಅವಿರತಭವ ಭಾವನಾತಿ ದೂರಂ |
ಭವಮುಖೈರ್ಮುನಿಭಿ:ಸದೈವ ದೃಶ್ಯಮ್ ||
ಭವಜಲಧಿಸುತಾರಣಾಂಘ್ರಿಪೋತಂ |
ಶರಣಮಹಂ ರಘುನಂದನಂ ಪ್ರಪದ್ಯೇ ||೫||

ಅವಿರತವಾಗಿ ಸಾಂಸಾರಿಕ ಯೋಚನೆಯಲ್ಲಿ ಮಗ್ನರಾದವರಿಗೆ ಬಹಳ ಅಂತರದಲ್ಲಿರುವಾತನೂ, ಸಂಸಾರದಿಂದ ವಿಮುಖರಾಗಿರುವ ಯೋಗಿಮುನಿವರ್ಯರಿಗೆ ಸದಾ ಕಾಣುವಾತನೂ, ಸಂಸಾರಸಾಗರವನ್ನು ದಾಟಲು ಸುಲಭರೂಪದ ಹರಿಗೋಲಿನಂತಿರುವ ಚರಣಾರವಿಂದಗಳುಳ್ಳ ರಘುಕುಲತಿಲಕ ಪ್ರಭು ಶ್ರೀರಾಮಚಂದ್ರನಿಗಾನು ನಮಿಸುವೆನು.

ಗಿರಿಶಗಿರಿಸುತಾಮನೋನಿವಾಸಂ |
ಗಿರಿವರ ಧಾರಿಣಮೀಹಿತಾಭಿರಾಮಂ ||
ಸುರವರದನುಜೇಂದ್ರ ಸೇವಿತಾಂಘ್ರಿಂ |
ಸುರವರದಂ ರಘುನಾಯಕಂ ಪ್ರಪದ್ಯೇ ||೬||

ಅನವರತವೂ ಗಿರಿಜಾಶಂಕರರ ಹೃತ್ಕಮಲ ನಿವಾಸಿಯಾಗಿರುವಾತನೂ, ಕೃಷ್ಣಾವತಾರದೊಳು ಹಿರಿದಾದ ಗೋವರ್ಧನ ಗಿರಿಯನ್ನೆತ್ತಿ ಹಿಡಿದಾತನೂ, ಬಯಸುವವರನ್ನು ತೃಪ್ತಿಗೊಳಿಸುವಾತನೂ, ಮಹಾ ಮಹಾ ದೇವ-ದಾನವರಿಂದ ಪಾದಸೇವೆಯನ್ನು ಸ್ವೀಕರಿಸಿ ವರಗಳನ್ನು ದಯಪಾಲಿಸುವಾತನೂ ಆಗಿರುವ ರಘುಕುಲದೊಡೆಯ ಪ್ರಭು ಶ್ರೀರಾಮನಿಗಾನು ಶರಣಾಗುವೆನು.

ಪರಧನ ಪರದಾರಾವರ್ಜಿತಾನಾಂ |
ಪರಗುಣಭೂತಿಷು ತುಷ್ಟಮಾನಸಾನಾಂ ||
ಪರಹಿತನಿರತಾತ್ಮಾನಾಂ ಸುಸೇವ್ಯಂ |
ರಘುವರಮಂಬುಜಲೋಚನಂ ಪ್ರಪದ್ಯೇ ||೭||

ಅನ್ಯರ ಸಂಪತ್ತು ಹಾಗೂ ಪರಸ್ತ್ರೀಯರನ್ನು ವರ್ಜಿಸುವವರಿಗೂ, ಅನ್ಯರಗುಣಗಳನ್ನು ಮತ್ತು ಐಶ್ವರ್ಯವನ್ನು ಕಂಡು ಸಂತಸ ಪಡುವವರಿಗೂ, ಹಾಗೆಯೇ ಅನ್ಯರ ಒಳಿತನ್ನು ಕಾಯುವುದರಲ್ಲಿ ನಿರತರಾದವರಿಗೂ ಧ್ಯಾನಿಸಲು ಯೋಗ್ಯನಾಗಿರುವ ಕಮಲನಯನ ರಘುವಂಶಪ್ರದೀಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.

ಸ್ಮಿತರುಜಿರವಿಕಾಸಿತಾನನಾಬ್ಜ- |
ಮತಿಸುಲಭಂ ಸುರರಾಜ ನೀಲನೀಲಮ್ ||
ಸಿತಜಲರುಹ ಚಾರು ನೇತ್ರ ಶೋಭಂ |
ರಘುಪತಿಮೀಶಂ ಗುರೋರ್ಗುರುಂ ಪ್ರಪದ್ಯೇ ||೮||

ಮುಗುಳುನಗೆಯಿಂದ ಕೂಡಿ ಮನೋಹರವೂ ವಿಕಸಿತವೂ ಆಗಿ ಕಾಣುವ ಮುಖಾರವಿಂದವುಳ್ಳವನೂ, ಭಕ್ತರಿಗೆ ಅತಿ ಸುಲಭ ಲಭ್ಯನೂ, ಇಂದ್ರನೀಲರತ್ನಸದೃಶ ಶ್ಯಾಮಲ ಶರೀರನೂ, ಬೆಳ್ದಾವರೆಯಂತೆ ರಮಣೀಯವಾದ ನಯನಗಳುಳ್ಳಾತನೂ, ದೊರೆಯೂ, ಗುರುಗಳಿಗೆ ಪರಮಗುರುವೂ ಆಗಿರುವ ರಘುಕುಲಾಧಿಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.

ಹರಿಕಮಲಜ ಶಂಭುರೂಪಭೇದಾತ್ವ- |
ಮಿಹ ವಿಭಾಸಿಗುಣತ್ರಯಾನುವೃತ್ತ: ||
ರವಿರಿವ ಜಲಪೂರಿತೋದ ಪಾತ್ರೇಷ್ವ- |
ಮರಪತಿಸ್ತುತಿ ಪಾತ್ರಮೀಶಮೀಡೆ ||೯||

ಜಲಭರಿತ ವಿವಿಧ ಪಾತ್ರೆಗಳಲ್ಲಿ ಸೂರ್ಯ ಪ್ರತಿಬಿಂಬವು ಹಲವು ರೂಪವಾಗಿ ಕಾಣುವಂತೆ ಸತ್ವ-ರಜತಮೊ ಗುಣಗಳೆನ್ನುವ ಮೂರು ಗುಣಗಳಿಂದ ಅನುಸರಿಸುವಂತೆ ವರ್ತಿಸುತ್ತಿರುವಾಗ ಹರಿ ಹರ ಬ್ರಹ್ಮರೆಂಬ ಭಿನ್ನ ಪ್ರಭೇದಗಳಿಂದ ನೀನು ಭಾಸವಾಗುತ್ತಿರುವೆ. ದೇವೇಂದ್ರನಿಂದ ಸ್ತುತಿಸಲ್ಪಡುವಾತನು ನೀನು. ನೀನೇ ಜಗದೊಡೆಯನು. ಇಂತಹಾ ರಘುಕುಲಾಧಿಪ ಪ್ರಭು ಶ್ರೀರಾಮನಾಗಿರುವ ನಿನಾಗಾನು ಶರಣಾಗುವೆನು.

ರತಿಪತಿಶತಕೋಟಿ ಸುಂದರಾಂಗಂ |
ಶತಪಥ ಗೋಚರ-ಭಾವನಾವಿಧೂರಂ ||
ಯತಿಪತಿ ಹೃದಯೇ ಸದಾ ವಿಭಾತಂ |
ರಘುಪತಿಮಾರ್ತಿಹರಂ ಪ್ರಭುಂ ಪ್ರಪದ್ಯೇ ||೧೦||

ನೂರುಕೋಟಿ ಮನ್ಮಥರಂತೆ ಮನೋಹರವಾಗಿರುವ ದೇಹವನ್ನು ಹೊಂದಿರುವಾತನೂ,ಯಜುರ್ವೇದೀಯ ಬ್ರಾಹ್ಮಣದಲ್ಲಿ ಹೇಳಿರುವಂತೆ ಧ್ಯಾನಿಸಲು ಸುಲಭ ಲಭ್ಯನೂ,ಮಹಾ ಮಹಾ ಋಷಿ ಮುನಿ ಯೋಗಿವರೇಣ್ಯರ ಅಂತರಂಗದಲ್ಲಿ ನಿರಂತರ ಬೆಳಗುತ್ತಲಿರುವಾತನೂ, ದು:ಖಗಳನ್ನು ದೂರೀಕರಿಸುವಾತನೂ ದೊರೆಯೂ ಆಗಿರುವ ರಘುಕುಲಾಧಿಪ ಪ್ರಭು ಶ್ರೀರಾಮನಿಗಾನು ಶರಣಾಗುವೆನು.

ಇತ್ಯೇವಂ ಸ್ತುವತಸ್ತಸ್ಯ ಪ್ರಸನ್ನೋಭೂದ್ರಘೂತ್ತಮ: |
ಉವಾಚ ಗಚ್ಚ ಭದ್ರಂತೇ ಮಮ ವಿಷ್ಣೋ: ಪರಂ ಪದಮ್ ||೧೧||

ಈ ರೀತಿಯಾಗಿ ಸ್ತೋತ್ರ ಮಾಡುತ್ತಲಿರುವ ಆ ಜಟಾಯುವಿಗೆ ರಘುಕುಲೋತ್ತಮನಾದ ಶ್ರೀರಾಮಚಂದ್ರನು ಕರುಣೆದೋರಿ ಇಂತೆಂದು ಅನುಗ್ರಹಿಸಿದನು. ” ಹೇ ಜಟಾಯುವೇ; ಮಹಾವಿಷ್ಣುವೇ ಆಗಿರುವ ನನ್ನ ಶ್ರೇಷ್ಠ ಪದವಿಯಾಗಿರುವ ಮೋಕ್ಷಧಾಮದಲ್ಲಿ ಶಾಶ್ವತವಾಗಿ ನೆಲೆಸುವವನಾಗು. ನಿನಗೆ ಶುಭವಾಗಲಿ.”

ಶೃಣೋತಿ ಯದಿದಂ ಸ್ತೋತ್ರಂ ಲಿಖೇದ್ವಾನಿಯತ: ಪಠೇತ್ |
ಸ ಯಾತಿ ಮಮ ಸಾರೂಪ್ಯಂ ಮರಣೇಮತ ಸ್ಮೃತಿಂ ಲಭೇತ್ ||೧೨||

ಯಾವಾತನು ನಿನ್ನಿಂದ [ಜಟಾಯುವಿನಿಂದ] ರಚಿಸಲ್ಪಟ್ಟಿರುವ ಈ ಸ್ತೋತ್ರವನ್ನು ನಿಯಮಿತವಾಗಿ ಬರೆದೋದುವನೋ ಅವನು ಅಂತ್ಯಕಾಲದಲ್ಲಿ ನನ್ನ ಸ್ಮರಣೆಯುಳ್ಳವನಾಗಿ ಮರಣಾನಂತರ ನನ್ನ “ಪ್ರತಿರೂಪ”ವೆನ್ನುವ ಮುಕ್ತಿಗೆ ಪಾತ್ರನಾಗುವನು.

|| ಇತಿ ಜಟಾಯುಕೃತ ಶ್ರೀರಾಮ ಸ್ತೋತ್ರಮ್ ||
|| ಈ ರೀತಿಯಾಗಿ ಜಟಾಯುವಿನಿಂದ ರಚಿಸಲ್ಪಟ್ಟ ಶ್ರೀರಾಮ ಸ್ತೋತ್ರಗಳ ಭಾವಾರ್ಥವಾಗಿದೆ ||

ಶ್ರೀರಾಮ ವಸಂತ ನವರಾತ್ರಿಯ ಸಂಧರ್ಭದಲ್ಲಿ ಅಪರೂಪದ ಸ್ತೋತ್ರವನ್ನು ಪಠಿಸಿಕೃತಾರ್ಥರಾಗೋಣ.
******

No comments:

Post a Comment